ಚಿತ್ಸುಖ-
ತತ್ತ್ವಪ್ರದೀಪಿಕಾ ಎಂಬ ಖ್ಯಾತ ಗ್ರಂಥದ ಕರ್ತೃ. ಅದ್ವೈತದ ವಾದಭೂಮಿಕೆಯಲ್ಲಿ ಈತನ ಹೆಸರು ಪ್ರಮುಖವಾದುದು. ಈತ 13ನೆಯ ಶತಮಾನದ ಆದಿಭಾಗದಲ್ಲಿದ್ದನೆಂದು ತಿಳಿದುಬರುತ್ತದೆ. ಈತನ ಗುರು ಜ್ಞಾನೋತ್ತಮ. ಈತನ ಬಹು ಮುಖ್ಯ ಗ್ರಂಥ ತತ್ತ್ವಪ್ರದೀಪಿಕಾ. ಇದನ್ನು ಚಿತ್ಸುಖೀ ಎಂದೇ ಕರೆಯುವುದು ರೂಢಿಯಲ್ಲಿದೆ. ಇವನ ಇತರ ಗ್ರಂಥಗಳು ಹೀಗಿವೆ ; ಆನಂದಬೋಧಾಚಾರ್ಯರ ನ್ಯಾಯ ಮಕರಂದ ಮತ್ತು ಶ್ರೀಹರ್ಷನ ಖಂಡನ ಖಂಡ ಖಾದ್ಯ ಎನ್ನುವುದರ ಮೇಲಿನ ಭಾಷ್ಯಗಳು. ಅಲ್ಲದೆ ಶಂಕರಾಚಾರ್ಯರು ಬ್ರಹ್ಮಸೂತ್ರಗಳ ಮೇಲೆ ಬರೆದ ಭಾಷ್ಯದ ಮೇಲೆ ಭಾಷ್ಯ ಭಾವಪ್ರಕಾಶಿಕಾ, ಮಂಡನಮಿಶ್ರ ರಚಿತವಾದ ಬ್ರಹ್ಮಸಿದ್ಧಿ ಎನ್ನುವುದರ ಮೇಲೆ ಅಭಿಪ್ರಾಯಪ್ರಕಾಶಿಕಾ ಎಂಬ ಎರಡು ಗ್ರಂಥಗಳು. ಈತನ ಸ್ವತಂತ್ರಗ್ರಂಥಗಳೆಂದರೆ-ವಿವರಣ ತಾತ್ಪರ್ಯ ದೀಪಿಕಾ ಮತ್ತು ಬ್ರಹ್ಮಸೂತ್ರಗಳ ಮೇಲಿನ ಅಧಿಕರಣಮಂಜರೀ ಎನ್ನುವವು.

	ಶ್ರೀಹರ್ಷನ ಖಂಡನ ಖಂಡ ಖಾದ್ಯ ಚಿತ್ಸುಖನಿಗೆ ಬಹು ಮೆಚ್ಚು. ಆತನ ವಾದಸರಣಿಯನ್ನೇ ಉಪಯೋಗಿಸಿಕೊಂಡು ಮತ್ತೂ ಮುಂದುವರಿಸಿಕೊಂಡು ಅದ್ವೈತ ದೃಷ್ಟಿಯನ್ನು ಬಲಪಡಿಸುವ ವಾದಗಳನ್ನು ಈತ ಮುಂದಿಡುತ್ತಾನೆ. ತತ್ತ್ವಪ್ರದೀಪಿಕೆಯಲ್ಲಿ ನ್ಯಾಯಸಿದ್ಧಾಂತದ ವಿಮರ್ಶೆಯ ರೂಪದಲ್ಲಿ ಅದ್ವೈತದ ಮುಖ್ಯ ಪ್ರಣಾಳಿಕೆಗಳನ್ನು ಸ್ಥಿರಗೊಳಿಸುತ್ತಾನೆ. ಆತ್ಮ ತತ್ತ್ವದ ಸ್ವಪ್ರಕಾಶದ ವಿಚಾರದಲ್ಲಿ ಈತನದು ಅಧಿಕಾರವಾಣಿಯಾಗಿ ಇಂದೂ ಮಾನ್ಯವಾಗಿದೆ. ತತ್ತ್ವಪ್ರದೀಪಿಕೆ ನಾಲ್ಕು ಅಧ್ಯಾಯಗಳ ಪ್ರಕರಣ ಗ್ರಂಥ ಎನ್ನಬಹುದು. ಮೊದಲ ಅಧ್ಯಾಯದಲ್ಲಿ ಆತ್ಮ ಅಥವಾ ಚೈತನ್ಯದ ಲಕ್ಷಣವನ್ನೂ ಅವಿದ್ಯೆಯ ಸ್ವಭಾವವನ್ನೂ ವಿವರಿಸಲಾಗಿದೆ. ಎರಡನೆಯದರಲ್ಲಿ ನ್ಯಾಯ ಸಿದ್ಧಾಂತ ವಿಮರ್ಶೆ ಮುಖ್ಯಸ್ಥಾನ ಪಡೆದಿದೆ. ಮೂರನೆಯದರಲ್ಲಿ ಬ್ರಹ್ಮ ಸಾಕ್ಷಾತ್ಕಾರದ ಬಗೆ ಮತ್ತು ಜ್ಞಾನದ ಮೂಲಕ ಅದರ ಸಾಧ್ಯತೆಗಳನ್ನೂ ತಿಳಿಸಿದೆ. ನಾಲ್ಕನೆಯದರಲ್ಲಿ ಅಂತಿಮ ಗುರಿಯಾದ ಮೋಕ್ಷದ ವಿಚಾರವಿದೆ.
(ಕೆ.ಬಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ